ಬಲನೋಫೋರ
 ಬಲನೋಫೋರೇಸೀ ಕುಟುಂಬಕ್ಕೆ ಸೇರಿದ ಒಂದು ಸಸ್ಯ. ಬೇರಿನ ಪರಾವಲಂಬಿ. ಇದರಲ್ಲಿ ಸುಮಾರು 20 ಜಾತಿಗಳಿವೆ. ಸಾಮಾನ್ಯವಾಗಿ ಉಷ್ಣವಲಯ,  ಸಮಶೀತೋಷ್ಣವಲಯ ಮತ್ತು ಪರ್ವತ ಪ್ರದೇಶಗಳಲ್ಲಿ ಬೆಳೆಯುತ್ತದೆ. ಈ ಗಿಡಕ್ಕೆ ರೈಜೋಮ್ ಎಂಬ ಗುಪ್ತಕಾಂಡ ಉಂಟು. ಇದರಿಂದ ಕೆಲವು ಹೀರುಕಗಳು ಹೊರಟು ಅತಿಥೇಯ ಗಿಡದ ಬೇರಿಗೆ ಹೊಂದಿಕೊಂಡಿರುತ್ತವೆ. ಬಲನೋಫೋರದ ಕೆಲವು ಜಾತಿಯ ಸಸ್ಯಗಳಲ್ಲಿ ಮೇಣದಂಥ ವಸ್ತು ಇರುವುದು. ಇಂಥವುಗಳ ರೈಜೋಮನ್ನು ಜಾವ ದ್ವೀಪದಲ್ಲಿ ವಾಸಿಸುವ ಜನ ದೀಪದಂತೆ ಬೆಳಕಿಗೋಸ್ಕರ j. ರೈಜೆóೂೀಮಿನಿಂದ ಹೂಗೊಂಚಲು ಹೊರಡುತ್ತದೆ. ಇದರಲ್ಲಿ ಗಂಡು ಮತ್ತು ಹೆಣ್ಣುಹೂಗಳು ಒಂದೇ ಗಿಡದಲ್ಲಿರಬಹುದು ಅಥವಾ ಬೇರೆ ಬೇರೆ ಗಿಡಗಳಲ್ಲಿರಬಹುದು. ಹೂಗಳಲ್ಲಿ ಮೂರು ಪುಷ್ಟಪತ್ರಗಳಿವೆ. ಮೂರು, ನಾಲ್ಕು ಅಥವಾ ಹೆಚ್ಚು ಕೇಸರಗಳಿರಬಹುದು. ಅಂಡಾಶಯ ನೀಚಸ್ಥಾನದ್ದು ಒಂದೇ ಕೋಣೆ ಇರುತ್ತದೆ. ಭಾರತದಲ್ಲಿ ಕೆಲವೇ ಜಾತಿಯ ಸಸ್ಯಗಳಿವೆ. ಮುಂಬಯಿಯಲ್ಲಿ ಇದನ್ನು ಗಜ್‍ವಿಪಾಲ್ ಎಂಬ ಹೆಸರಿನಿಂದ ಮಾರುತ್ತಾರೆ. ಇದರ ಲೋಳೆಗೆ ಅಲ್ಲಿ ಉಪಯೋಗವಿದೆ.
(ಎಚ್.ಕೆ.ಎಸ್.ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ